
ಕನ್ನಡದಲ್ಲಿ ಸಂಗೀತ ರಚನೆಗಳನ್ನು ಮಾಡಿರುವ ಹರಿದಾಸರು ಮೂರು ರೀತಿಯ ರಚನೆಗಳನ್ನು ಮಾಡಿದ್ದಾರೆ; ಪದಗಳು, ಸುಳಾದಿಗಳು ಮತ್ತು ಉಗಾಭೋಗಗಳು. ತಾಳಮಾಲಿಕೆಗಳಾಗಿ ಹಾಡುವ ಸುಳಾದಿಗಳಲ್ಲಿ ಒಂದು ಪಲ್ಲವಿಯೂ, ಹಲವಾರು (೫-೭) ಚರಣಗಳೂ, ಮತ್ತೆ “ಜೊತೆ” ಎಂಬ ಹೆಸರಿನ ಕೊನೆಯೆರಡು ಸಾಲುಗಳೂ ಇರುತ್ತವೆ. ಸುಳಾದಿ ಎಂಬುದರ ಅರ್ಥ ಹಲವಾರು ವಿಶ್ಲೇಷಣೆಗಳ ನಂತರವೂ ಸ್ವಲ್ಪ ಅಸ್ಪಷ್ಟವಾಗಿದೆ. “ಸುಳುಹು ಹಾದಿ”, “ಸೂಳ್ ಹಾದಿ” (ಅಂದರೆ ಒಳ್ಳೆಯ ದಾರಿ) ಎಂಬುದೇ ಸುಳಾದಿ ಎಂದಾಗಿದೆ ಎಂದು ಒಂದು ಅಭಿಪ್ರಾಯ. ಒಂದು ವೇಳೆ ಇದು ಸರಿಯಾಗಿದ್ದರೆ, ಈ ರಚನೆಯ ಹೆಸರೂ ಕನ್ನಡವೇ ಎಂದಾಗುತ್ತದೆ. ತಾಳ ಪ್ರಧಾನವಾಗಿ ಒಂದೆ ರಾಗ ಅನೇಕ ತಾಳದಲ್ಲಿರುವುದು ಸುಳಾದಿ. ಸಪ್ತ ತಾಳಗಳಲ್ಲಿ ನುಡಿಗಳನ್ನು ಏಕತ್ವಗೊಳಿಸಿ 'ಜತೆ' ಎಂಬ 2 ಸಾಲಿನೊಂದಿಗೆ ಅಂಕಿತದೊಂದಿಗೆ ಕೊನೆಗೊಳ್ಳುವ ರಚನೆಯಾಗಿ 'ಸುಳಾದಿ' ದಾಸ ಸಾಹಿತ್ಯದಲ್ಲಿ ತನ್ನದೆ ಆದ ಸ್ಥಾನವನ್ನು ಪಡೆದುಕೊಂಡಿದೆ". ಎಳು ಭಿನ್ನ ತಾಳಗಳು - ಧ್ರುವ, ಮಟ್ಟ, ರೂಪಕ, ಝಂಪೆ, ತ್ರಿಪುಟ, ಅಟ್ಟ ಮತ್ತು ಆದಿ. ಕನಿಷ್ಟ 5, ಗರಿಷ್ಟ 10 ನುಡಿಗಳು ಸುಳಾದಿಗಳಲ್ಲಿ ಇವೆ.